Friday, 10 February 2017

ಶಿವಮೊಗ್ಗದ ಡಾನ್ ಆಗುವ ಇನಾಯತ್ 
ಕನಸು ನನಸಾಗಲೇ ಇಲ್ಲ

 ಶಿವಮೊಗ್ಗದ ಭೂಗತ ಲೋಕದ ಚರಿತ್ರೆಯ ಒಂದು ಪುಟಕ್ಕೆ ವಿರಾಮ

ಶಿವಮೊಗ್ಗ : ನಗರದಲ್ಲಿ ಮತ್ತೆ ರೌಡಿಗಳ ಹಾವಳಿ ಆರಂಭವಾಗಿದೆ. ವಿವಿಧ ಅಪರಾಧಗಳನ್ನು ಎಸಗುತ್ತಿದ್ದ ಯುವಕರನ್ನು ಪೊಲೀಸರು ಮಟ್ಟಹಾಕುತ್ತಿರುವಂತೆಯೇ ವೃತಿನಿರತ ರೌಡಿಗಳು ಘರ್ಜಿಸಲಾರಂಭಿಸಿದ್ದಾರೆ. ಈ ಮೂಲಕ ತಮ್ಮ ಹಳೆಯ ದ್ವೇಷಗಳನ್ನು ತೀರಿಸಿಕೊಳ್ಳಲು ಕತ್ತಿ, ಮಚ್ಚು, ಲಾಂಗ್‌ಗಳನ್ನು ಝಳಪಿಸತೊಡಗಿದ್ದಾರೆ.
ನಗರದ ಅಣ್ಣಾನಗರ ಮುಖ್ಯರಸ್ತೆಯಲ್ಲೇ ಇನಾಯತ್ (ಹಯಾತ್) ಎನ್ನುವ ಯುವಕ ಬುಧವಾರ ಸಂಜೆ ಕೊಲೆಯಾಗಿದ್ದಾನೆ. ಈತ ಕಳೆದ ತಿಂಗಳಷ್ಟೇ ಜೈಲಿನಿಂದ ಬಿಡುಗಡೆಯಾಗಿ ಬಂದವನು. ಹಳೆಯ ಗ್ಯಾಂಗ್ ವೈಷಮ್ಯದಿಂದ ಕೊಲೆ ನಡೆದಿದೆ ಎನ್ನುವುದು ಪೊಲೀಸರ ಹೇಳಿಕೆ. ಇಲಿಯಾಸ್ ನಗರದ ವಾಸಿ ಇನಾಯತ್ ಕಳೆದ ಅಕ್ಟೋಬರ್‌ನಲ್ಲಿ ದಾಡಿ ಬಶೀರ್ ಮನೆಗೆ ನುಗ್ಗಿ ಆತನ ಹಣೆಗೆ ರಿವಾಲ್ವರ್ ಇಟ್ಟು 1 ಕೋಟಿ ರೂ. ನೀಡುವಂತೆ ಕೇಳಿದ್ದ. ಕೊಡದಿದ್ದರೆ ಸುಟ್ಟು ಹಾಕುವ ಬೆದರಿಕೆ ಹಾಕಿದ್ದ ಎಂಬ ಆರೋಪ ಹೊತ್ತಿದ್ದ. ಈ ಹಿನ್ನೆಲೆಯಲ್ಲಿ ಈತನ ಬಂಧನವಾಗಿತ್ತು.
ಈ ಕೃತ್ಯಕ್ಕಾಗಿ ಈತ ಮಹಾರಾಷ್ಟ್ರದಿಂದ ಪಿಸ್ತೂಲು ಖರೀದಿಸಿದ್ದ ಎಂಬ ಆಂಶವೂ ಬಯಲಿಗೆ ಬಂದಿದೆ. ಈತನ ತಂದೆ ನಸ್ರು ಹಳೆೆಯ ರೌಡಿಯಾಗಿದ್ದ. ಸುಮಾರು 15 ವರ್ಷಗಳ ಹಿಂದೆಯೇ ನಸ್ರು ಅಂದಿನ ಶ್ರೀಗಂಧ ಚೋರರಿಂದ ಹಫ್ತ್ತಾ ವಸೂಲಿ ಮಾಡುತ್ತಿದ್ದ. ಆಗ ಶ್ರೀಗಂಧದ ಕಳ್ಳತನ ಎಗ್ಗಿಲ್ಲದೆ ನಡೆಯುತ್ತಿತ್ತು. ಸ್ಮಗ್ಲರ್‌ಗಳು ಮರವನ್ನು ಮನಬಂದಂತೆ ದೋಚುವ ಮೂಲಕ ಕೋಟಿ ಕೋಟಿ ಗಳಿಸಿದ್ದರು. ಆಗ ಇವರ ಬೆನ್ನಿಗೆ ಬಿದ್ದವನೇ ನಸ್ರು. ತಿಂಗಳ ಮಾಮೂಲಿ ಕೊಡುವಂತೆ ಬೆದರಿಕೆ ಹಾಕುತ್ತಿದ್ದ. ಇದಕ್ಕೆ ಹೆದರಿದ್ದ ಎಷ್ಟೋ ಸ್ಮಗ್ಲರ್‌ಗಳು ವ್ಯವಹಾರ ಮಾಡಿಕೊಂಡಿದ್ದರು. ಆದರೆ ಹಣ ಕೊಡದ ಕೆಲವರು ನಸ್ರುಗೆ ಬುದ್ಧಿ ಕಲಿಸಲು ಮುಂದಾಗಿದ್ದರು.
ಹಣ ಕೊಡದಿದ್ದರೆ ಕಿಡ್ನಾಪ್ ಮಾಡಿಸುತ್ತಿದ್ದ ಎಂಬ ಮಾತು ಕೇಳಿಬರುತ್ತಿತ್ತು. ಹೀಗೆ ನಟೋರಿಯಸ್ ಆಗಿ ಬೆಳೆದಿದ್ದ ನಸ್ರುವನ್ನು ನಡುರಸ್ತೆಯಲ್ಲೇ ಕಡಿದುರುಳಿಸಲಾಗಿತ್ತು  ನಸ್ರುವಿನ ಉಪಟಳ ತಾಳಲಾರದೆ  ಅಂದು ಮಾಮೂಲಿ ಕೊಡುತ್ತಿದ್ದವರು, ಈತನನ್ನು ಮುಗಿಸುವಂತೆ ವ್ಯವಹಾರ ಮಾಡಿಕೊಂಡಿದ್ದರು. ಆ ಪ್ರಕಾರ ಕೆಲಸವು ಮುಗಿದಿತ್ತು.
ಈ ಘಟನೆಯ ದ್ವೇಷವೇ ಮೊನ್ನೆ ಕೊಲೆಯಲ್ಲಿ ಪರ್ಯಾವಸನಗೊಂಡಿದೆ. ಈ ಕೊಲೆಯನ್ನು ಕೀಲಿ ಇಮ್ರಾನ್ ಕಡೆಯವರು ನಡೆಸಿದ್ದಾರೆಂದು ಪೊಲೀಸರು ಹೇಳುತ್ತಿದ್ದಾರೆ. ಇದೇನೇ ಇದ್ದರೂ, ಶಿವಮೊಗ್ಗ ನಗರದ ಅಂಡರ್ ವರ್ಲ್ಡ್ ನಾಯಕನಾಗಿ ತಾನು ಆಳಬೇಕೆಂಬ ಹೊಂಗನಸು ಕಂಡಿದ್ದ ಇನಾಯತ್ ಮಣ್ಣಾಗಿದ್ದಾನೆ.
ಓದುವ ವಯಸ್ಸಿನಲ್ಲೇ ದಾರಿತಪ್ಪಿದ್ದ ಮಗನನ್ನು ಮನೆಯವರು ಸರಿದಾರಿಗೆ ತರುವ ಯತ್ನ ಮಾಡಿದ್ದರು. ಆದರೆ ಆಗಲೇ ಕೆಲವರ ಸಹವಾಸ ಮತ್ತು ಇಲ್ಲಸಲ್ಲದ ಚಟಕ್ಕೆ ಅಂಟಿಕೊಂಡಿದ್ದ ಎಂಬ ಮಾತು ಕೇಳಿಬರುತ್ತಿದೆ. ಜೊತೆಗೆ ದಿನದ ಖರ್ಚಿಗಾಗಿ ವಾಮಮಾರ್ಗದಲ್ಲಿ ಹಣಸಂಪಾದನೆ ಮಾಡುವ ಮೂಲಕ ಪೊಲೀಸರ ಕಣ್ಣಿಗೆ ಬಿದ್ದಿದ್ದ. ಪೊಲೀಸರು ಎಷ್ಟೇ ಬುದ್ಧಿ ಹೇಳಿದ್ದರೂ ಕೇಳುವ ಮನಃಸ್ಥಿತಿ ಆತನದ್ದಾಗಿರಲಿಲ್ಲ. ಏಕೆಂದರೆ ಡಾನ್ ಎಂಬ ಶಬ್ದದ ಮೂಲಕ ತಾನು ಪ್ರಸಿದ್ಧಿಯಾಗಬೇಕೆಂಬ ಕನಸನ್ನು ಆತ ಕಂಡಿದ್ದ ಎನ್ನುತ್ತಾರೆ ಆತನ ವಾಸದ ಬಡಾವಣೆಯ ಕೆಲವರು.
ಭೂಗತ ಲೋಕದಲ್ಲಿ ಹೆಸರು ಮಾಡಬೇಕೆಂಬ ಇನಾಯತ್ ಕನಸು ನನಸಾಗಲೇ ಇಲ್ಲ. ಅಪ್ಪನಂತೆಯೇ ರಸ್ತೆಯಲ್ಲೇ ನೆತ್ತರು ಚೆಲ್ಲಿ ಎದುರಾಳಿಗಳ ಮಚ್ಚಿನೇಟಿಗೆ ಬಲಿಯಾದ. ಈಗ ಈತನ ಕೊಲೆ ಮಾಡಿದವರು ಇನ್ನೊಂದು ದಾಳಿಗೆ ಸಿಲುಕಿ ಮತ್ತೆ ರೌಡಿಯಿಸಂ ಇತಿಹಾಸ ಮುಂದುವರೆಸುವುದು ನಿಶ್ಚಿತ.
ಶಿವಮೊಗ್ಗದ ರೌಡಿಸಂ ಚರಿತ್ರೆ ಮುಂದುವರೆಯುತ್ತಲೇ ಇದೆ. ಹೊಸ ರೌಡಿಗಳು ಬರುತ್ತಿದ್ದಾರೆ. ಹಳೆಯ ರೌಡಿಗಳು ಸಾಯುತ್ತಿದ್ದಾರೆ. ಇದು ಪೊಲೀಸರನ್ನು ಮಾತ್ರ ನಿದ್ದೆಗೆಡಿಸಿದೆ.
...............................